ರಾಗ – ಮುಖಾರಿ ತಾಳ – ಏಕ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ತೊರೆದು ಜೀವಿಸಬಹುದೆ || ಪ ||
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಕರಪಿಡಿದೆನ್ನನು ಕಾಯೊ ಕರುಣಾನಿಧಿ || ಅ.ಪ ||
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ಮುನಿದರೆ ರಾಜ್ಯವ ಬಿಡಬಹುದು
ಕಾಯಜಪಿತ ನಿನ್ನಡಿಯ ಬಿಡಲಾಗದು || ೧ ||
ಒಡಲು ಹಸಿದರೆ ಅನ್ನವ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು
ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು || ೨ ||
ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು
ಮಾನಾಭಿಮಾನವ ತಗ್ಗಿಸಬಹುದು
ಪ್ರಾಣದಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು || ೩ ||