ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ (ಶ್ರೀ ಪುರಂದರದಾಸರು)

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ || ಪ ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ ||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ || ೨ ||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು || ೩ ||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ || ೪ ||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ || ೫ ||

<p>You cannot copy content of this page</p>